ಕವನಗಳು ಕಥೆ ಲೇಖನಗಳು ಅಂತರಾಳದ ಮಾತುಗಳು

Saturday, 4 October 2014

ಭಾವನೆಗಳ ತವರೂರು...ನೆನಪಿನಂಗಳದಲ್ಲಿ ಸಹಸ್ರಲಿಂಗ.....

ಜೀವನವೇ ಒಂದು ನಾವೆ. ನಾವೆಯ ಅಕ್ಕ ಪಕ್ಕದಲ್ಲಿ ಚಿಕ್ಕ ಚಿಕ್ಕ ನೆನಪಿನ ದೋಣಿಗಳು ಚುಕ್ಕಾಣಿಯಿಲ್ಲದೆ ತೇಲುತ್ತಿರುತ್ತವೆ. ಚಿಕ್ಕ ಚಿಕ್ಕ ದೋಣಿಗಳ ರೂವಾರಿಗಳು ನಾವು. ಕೆಲವು ಚುಕ್ಕಾಣಿ ರಹಿತ ದೋಣಿಗಳು ಎಂದೋ ಮುಳುಗಿ ಹೋದರೆ, ಹಲವು ಇನ್ನೂ ಜೀವಂತವಾಗಿ ನೆನಪಿನಂಗಳದಲ್ಲಿ ತೇಲುತ್ತಿವೆ.

ನಾವು ದೊಡ್ಡವರಾಗುತ್ತಿದ್ದಂತೆ ಜನ ಜಂಗುಳಿಯಲ್ಲಿ, ಎತ್ತರೆತ್ತರದ ಕಟ್ಟಡಗಳ ಮಧ್ಯೆ, ಬದುಕಿನ ಸಂಘರ್ಷದಲ್ಲಿ ಭಾವನೆಗಳನ್ನು ದೂರಸರಿಸಿ, ಮುಗ್ಧತೆಯನ್ನು ಕಳೆದುಕೊಳ್ಳುತ್ತೆವೆ.
ಭಾವನೆಗಳು ಸಾವಿನವರೆಗೂ ಜೀವಂತವಾಗಿರಬೇಕು....

ನವರಾತ್ರಿಯ ದಿನಗಳಲ್ಲಿ ಕಾಡುವುದು ಸಹಸ್ರಲಿಂಗದ ನೆನಪು. ಶಾಲೆಗೆ ನವರಾತ್ರಿಯ ರಜೆ ಪ್ರಾರಂಭವಾಗುವುದನ್ನೇ ಕಾಯುತ್ತಿದ್ದೆ. ಶಾಲ್ಮಲಾಳ ತೀರದಲ್ಲಿ ದೊಡ್ಡಮ್ಮನ ಮನೆ. ನವರಾತ್ರಿ ದೊಡ್ಡಮ್ಮನ ಮನೆಯಲ್ಲೇ. ದೊಡ್ಡಮ್ಮನ ಮಗಳು, ಗೆಳತಿಯರೆಲ್ಲ ಸೇರಿ ದಿನವೆಲ್ಲ ಶಾಲ್ಮಲಾಳ ಮಡಿಲಲ್ಲಿ ಕಳೆದ ಆ ನೆನಪುಗಳು ನನಗೆ ಇಂದಿಗೂ ಸಜೀವ.ಶಾಲ್ಮಲ ಯಾವ ಕಲುಷಿತಕ್ಕೆ ಒಳಗಾಗದ ನದಿ. ಸ್ವಚ್ಛ ಸುಂದರ ಪರಿಸರದಲ್ಲಿ ಮೌನವಾಗಿ ನಿನಾದದಿಂದ ಹರಿಯುತ್ತಾಳೆ.
ಸ್ವಚ್ಛ ನೀರಿನಲ್ಲಿ ನದಿಯ ತಳವೂ ಗೋಚರವಾಗುವುದು. ಮೀನಿನ ಜಾಡನ್ನೂ ಅನುಸರಿಸಬಹುದು...
ಎಂಜಲನ್ನು ತೂಕಿ ಮೀನುಗಳನ್ನು ಒಂದೆಡೆ ಸೇರಿಸಿ, ಕಲ್ಲನ್ನು ಎಸೆದು ಮೇಲ್ಛಿಮ್ಮಿದ ನೀರಿನ ತುಂತುರುಗಳ ಸಿಂಚನ, ಈಜುವಾಗ ಮುಳುಗಿ ಎದ್ದ ನೆನಪುಗಳು ತಾಜವಾಗಿದ್ದು ನನ್ನ ಮಕ್ಕಳ ಸಂಗತದಲ್ಲಿ. ನನ್ನ ಮಕ್ಕಳ ಜೊತೆಯಲ್ಲಿ ನನ್ನ ಭಾವನೆಗಳೂ ಎಚ್ಚೆತ್ತುಕೊಂಡವು. ಮಕ್ಕಳ ಸಂಗಡ ನಾನೂ ಮತ್ತೊಮ್ಮೆ ಮಗುವಾದೆ...ಸಹಸ್ರಲಿಂಗ ಸಾವಿರ ಶಿವಲಿಂಗಗಳ ಸಮೂಹ.ಉತ್ತರ ಕನ್ನಡ, ಸಿರಸಿ ತಾಲೂಕಿನಲ್ಲಿ ಈ ಸ್ಥಳವಿದೆ. ರಾಜ ಸದಾಶಿವರಾಯ ಈ ಲಿಂಗಗಳನ್ನು ಕೆತ್ತಿಸಿದ್ದಾನೆಂದು ಇತಿಹಾಸ ಹೇಳುತ್ತದೆ. ತಾತ ಅಜ್ಜಿಯರ ಕತೆಯಲ್ಲಿ.. ಗೋಕರ್ಣದಂತೆ ಪವಿತ್ರ ತೀರ್ಥಸ್ಥಾನವಾಗಲೆಂದು ದೇವತೆಗಳು ಒಂದೇ ರಾತ್ರಿಯಲ್ಲಿ ಸಾವಿರ ಶಿವ ಲಿಂಗಗಳನ್ನು ಕೆತ್ತಲು ನಿರ್ಧರಿಸಿ ಕೆಲಸ ಪ್ರಾರಂಭಿಸಿದ್ದರು. ಅಂತ್ಯದಲ್ಲಿ ಇನ್ನೂ ಒಂದು ಲಿಂಗದ ಕೆತ್ತನೆಯ  ಶೇಷವಿದ್ದಾಗ ಬೆಳಗಿನ ಕೋಳಿ ಕೂಗಿತ್ತು. ದೇವತೆಗಳು ಕೆಲಸವನ್ನು ಬಿಟ್ಟು ದೇವಲೋಕ ಸೇರಿದರು. ಮಾನವರಿಗೆ ಕಾಣದಂತೆ ಬೆಳಗಾಗುವುದರೊಳಗಾಗಿ ಸಾವಿರ ಶಿವ ಲಿಂಗದ ಕೆತ್ತನೆಯ ಕಾರ್ಯ ಸಂಪೂರ್ಣವಾಗದ ಕಾರಣ ಪವಿತ್ರ ಸ್ಥಾನವಾಗಲಿಲ್ಲ. ಹೀಗಾಗಿ ಸಹಸ್ರಲಿಂಗಕ್ಕೆ ಒಂದು ಲಿಂಗ ಕಡೆಮೆಯಿದೆ ಎನ್ನುವ ವದಂತಿಯೂ ಮಾತಿನ ಕಥೆಯಲ್ಲಿದೆ.ರಮಣೀಯವಾದ, ಮನಸ್ಸಿಗೆ ಆನಂದ ನೀಡುವ ಪ್ರಕೃತಿ ಸೌಂದರ್ಯದ ನಡುವೆ ಶಾಲ್ಮಲ ನದಿಯನ್ನು,  ಶಿವ ಲಿಂಗಗಳನ್ನು ಮತ್ತು ಹಲವಾರು ಕೆತ್ತನೆಯನ್ನು ನೋಡುವುದೇ ಆನಂದ, ಆಡಂಬರ.
ಭಾವನೆಗಳನ್ನು ಹರಿಯಬಿಡಿ, ಭಾವನೆಗಳ ಜೊತೆಗೆ ಮುಗ್ಧತೆ ತಾನಾಗಿಯೆ ಆವರಿಸಿ ನಾವೂ ಮಕ್ಕಳಾದಾಗ ಬಾಳೇ ನಂದನವನ.

 ಡಾ. ವಾಣಿ ಭಾಗ್ವತ

3 comments:

 1. ನನ್ನ ಒಂದು requestಗೆ ಬೆಲೆಕೊಟ್ಟು ಬ್ಲಾಗನ್ನು ಪ್ರಾರಂಭಿಸಿದ ತಾವು ನನಗೆ ಬಹು ಮಾನ್ಯರು.

  ಇಂದಿಗೂ ಕಲುಕ್ಷಿತಗೊಳ್ಳದವಳಾದ ತಾಯಿ ಶಾಲ್ಮಲೆ ಎಂದಿಗೂ ತನ್ನ ಶುದ್ಧತೆಯನ್ನು ಕಾಪಾಡಿಕೊಳ್ಳಲಿ ಎಂಬುದೇ ನಮ್ಮ ಆಶಯ.

  ಸಹಸ್ರಲಿಂಗ ಕ್ಷೇತ್ರವನ್ನು ಪರಿಚಯಿಸಿ ನಮ್ಮನ್ನು ಅಲ್ಲಿಗೆ ಭೇಟಿ ಕೊಡಲು ಪ್ರೇರೇಪಿಸಿದ್ದಕ್ಕಾಗಿ ಧನ್ಯವಾದಗಳು.

  ಚಿತ್ರಗಳು ಇಷ್ಟವಾದವು.

  ತಮ್ಮನ್ನು ಫೇಸ್ ಬುಕ್ಕಿನ 3K ಗುಂಪಿಗೆ ಸೇರಿಸಿದ್ದೇನೆ. ಅಲ್ಲಿ ತಮ್ಮ ಬ್ಲಾಗನ್ನೂ share ಮಾಡಿದ್ದೇನೆ.

  https://www.facebook.com/photo.php?fbid=602047969839656&set=gm.483794418371780&type=1&theater

  ReplyDelete
 2. ವಾಣಿ ಮೇಡಮ್...ಬ್ಲಾಗ್ ಲೋಕಕ್ಕೆ ಸ್ವಾಗತ :) ...ಸಹಸ್ರಲಿಂಗದ ಪುಟ್ಟ ಪರಿಚಯ ಚೆನಾಗಿದೆ...ಇಷ್ಟವಾಯಿತು..
  ಬರೆಯುತ್ತಿರಿ:)..
  ನಮಸ್ತೆ :)

  ReplyDelete
 3. ಭಾವನೆಗೂ ಒಂದು ತವರೂರನ್ನು ಹುಡುಕಿಕೊಟ್ಟು ಸಹಸ್ರಲಿಂಗ ಕ್ಷೇತ್ರದ ಇತಿಹಾಸವನ್ನು ವರ್ಣಿಸಿದ್ದು ತಿಳುವಳಿಕೆ ನೀಡಿದ್ದು ಉತ್ತಮವಾಗಿದೆ. ಬ್ಲಾಗ್ ಲೋಕಕ್ಕೆ ಕಾಲಿಟ್ಟ ತಮಗೆ ಯಶಸ್ಸು ಕಾಲ್ಮುರಿದು ಬೀಳಲಿ.

  ReplyDelete