ಕವನಗಳು ಕಥೆ ಲೇಖನಗಳು ಅಂತರಾಳದ ಮಾತುಗಳು

Monday 6 October 2014

ದ್ರೌಪದಿ ಆಗಲಾರೆ...


ಪುನಃ ಪುನಃ ಆ ಎರಡು ಕಣ್ಣುಗಳು ನನ್ನನ್ನು ಕಾಡುತ್ತಿದ್ದವು. ಮನೆಗೆ ಬರಲಿ,ಕೆಲಸಕ್ಕೆ ಹೋಗಲಿ ಆ ಕಣ್ಣುಗಳು ನನ್ನನ್ನೇ ಹಿಂಬಾಲಿಸುತ್ತಿದ್ದವು.ನಿದ್ದೆಯಲ್ಲೂ ಕಾಡುತ್ತಿದ್ದವು.ನಾನು ಬಾನಂಗಳದಿ ಕಣ್ಣು ತೆರೆಯಲು ತಾರೆಗಳ ಮಧ್ಯೆ ನನಗೆ ಕಾಣುತ್ತಿದ್ದವು ಆ ದಯಾನೀಯ ಅಸಾಯಕ ಕಣ್ಣುಗಳು. ತೊಯ್ದಾಡುತ್ತಿದ್ದ ದುಗುಡ ತುಂಬಿದ ನನ್ನ ಮನಸ್ಸು ಛಿದ್ರ ಛಿದ್ರವಾಗಿತ್ತು.ಆ ನೇತ್ರಗಳು ಉಕ್ಕುತ್ತಿರುವ ಕಣ್ಣೀರು ಮನದಾಳದ ಸಂದೇಶವನ್ನು ಸಾರುತ್ತಿದ್ದು,ಇವುಗಳಿಗೆ ಭಾಷೆಗಳ ಅಗತ್ಯವಿಲ್ಲ. ತುಂತುರು ಮಳೆಯು ಭೂಮಿಗೆ ಹಿತನೀಡುವುದು ತಂಗಾಳಿಯು ಮನಕೆ ಮುದನೀಡುವುದು ಬಿರುಗಾಳಿಯು ಎಲ್ಲವನ್ನೂ ಧ್ವಂಸ ಗೊಳಿಸುವುದು. ನನ್ನ ಮನವೂ ಹಾಗೆಯೇ ಆಗಿತ್ತು.
ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೆ. ಒಬ್ಬಳು ಮುಗ್ಧೆ ತನ್ನ ಚಿಕ್ಕ ಮಗುವಿನ ಜೊತೆ ಶೌಚಾಲಯದ ಬಳಿ ಕುಳಿತಿದ್ದಳು. ಎರಡು ಬಾರಿ ಅಡ್ಡಾಡಿ ಬಂದೆ. ಅವಳು ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಳು. ದಾರಿಯಲ್ಲಿ ಹೋಗುವ ಮಾರಿಯನ್ನು ಮನೆಗೆ ಕರೆಯುವುದಾ? ಇನ್ನೊಂದೆಡೆ ನೀನೂ ಹೆಣ್ಣಲ್ಲವೆ? ತಾಯಿಯಲ್ಲವೆ?ಅಂತರಾತ್ಮ ಚೀರುತ್ತಿತ್ತು. ಕೇಳಿಯೇ ಬಿಟ್ಟೆ,”ಬೆಹೆನ್ ಕಹಾಂ ಜಾ ರಹಿ ಹೋ?” ಅಶೃವನ್ನು ಧಾರಾಕಾರವಾಗಿ ಸುರಿಸಿದಳು. ನಾನೂ ಅವಳಲ್ಲಿ ಐಕ್ಯವಾಗುತ್ತಿದ್ದೆ. ನನ್ನ ಸ್ಪರ್ಷ ಅವಳಿಗೆ ಸಾಂತ್ವನ ನೀಡುತ್ತಿತ್ತು,”ದೀದೀ ಮೇರೀ ಕಹಾನೀ ಸುನೋ….”ಅವಳ ಕಣ್ಣುಗಳನ್ನು ನೋಡುತ್ತಿದ್ದಂತೆ ನನ್ನ ಕರುಳು ಕಿತ್ತು ಬಂದಂತಾಗಿತ್ತು.


ಬಡತನದಲ್ಲಿ ಬೆಳೆದ ನಾನು ಕನಸುಗಳ ರಾಜಕುಮಾರಿ.ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗಿತ್ತು.ದೂರದೂರಿನಲ್ಲಿ ಕನಸು ನನಸಾಗಿಸಲು ಹೊರಟಿದ್ದೆ.ರೈಲು ಬಸ್ಸು ಬದಲಿಸುತ್ತ, ಅವನ ಜೊತೆ ಅವನ ಸ್ಪರ್ಷ ನನಗೆ ಮುದನೀಡಿತ್ತು. ಬಾನಲ್ಲಿ ಯಾವ ಪರಿವೆ ಇಲ್ಲದೆ ಹಾರಾಡುತ್ತಿದ್ದೆ. ಐದು ಗಂಡು ಮಕ್ಕಳು,ತಾಯಿ ಚಿಕ್ಕದಾದ ಒಂದು ಮನೆ.ಹೊರಾಂಗಳ,ಅಡುಗೆಮನೆಯಲ್ಲಿಯೇ ಅವನು ನನಗೆ ಸ್ವರ್ಗ ದರ್ಶನ ಮಾಡಿಸಿದ. ಅದು ನನ್ನ ಅರಮನೆಯಾಗಿತ್ತು.
ಮುಸ್ಸಂಜೆಯಲ್ಲಿ ನನ್ನ ಇನಿಯನ ದಾರಿ ಕಾಯುತ್ತ ಹಾಡು ಕೇಳುತ್ತಿದೆ
ಇಕ್ ಪ್ಯಾರ ಕಾ ನಗಮಾ ಹೆ ಮೌಜೊಂಕೀ ರವಾನೀ ಹೆ
ಜ಼ಿಂದಗೀ ಒರ್ ಕುಛ್ಃ ಭೀ ನಹೀ ತೇರೀ ಮೇರೀ ಕಹಾನೀ ಹೆ…………….”
ಗಾಳಿಗೆ ಒದ್ದಾಡುತ್ತಿರುವ ದೀಪ,ಜೋರಾದ ಮಳೆ,ಗುಡುಗು,ಸಿಡಿಲು ಕಿಟಕಿಯ ಬಾಗಿಲುಗಳನ್ನು ಮುಚ್ಚಿದೆ.ಅತ್ತೆ ದೂರದ ಸಂಬಂಧಿಕರ ಮನೆಗೆ ಹೋಗಿದ್ದರು. ನನ್ನ ಗಂಡನ ತಮ್ಮಂದಿರೆಲ್ಲ ಮನೆ ಸೇರಿದರು. ನನ್ನವರಿಗಾಗಿ ಕಾಯುತ್ತಿದ್ದೆ. ಕಂದೀಲು ದೀಪ ಮಂದವಾಗಿತ್ತು. ನನ್ನವರು ಬಂದರು, ಎಲ್ಲರಿಗೂ ಊಟವಿಕ್ಕಿದೆ. ಗಾಳಿ ಮಳೆ ಅಂಧಕಾರದ ಮಧ್ಯೆ ಗುಡುಗು ಸಿಡಿಲುಗಳ ಅಬ್ಬರ. ಈ ಅಂಧಕಾರ ಸಿಡಿಲುಗಳು ನನ್ನ ಜೀವನದಲ್ಲೂ ಬಿರುಗಾಳಿಯನ್ನು ತರುವವೆಂದು ತಿಳಿದಿರಲಿಲ್ಲ.ಚುಮು ಚುಮು ಮುಂಜಾವು ಕಣ್ಣು ಬಿಟ್ಟೆ,ತುಂತುರು ಮಳೆಯಿತ್ತು,ಎರಡು ಬಾರಿ ಕಣ್ಣನ್ನು ಉಜ್ಜಿಕೊಂಡೆ ನಿದ್ದೆಯ ಮಂಪುರು ಮತ್ತೆ- ಅಲ್ಲ ಸತ್ಯ.ನನ್ನ ಪಕ್ಕದಲ್ಲಿ ನನ್ನ ಮೈದುನ? ನನ್ನವರಿಗೆ ಮುಖ ತೋರಿಸಬಾರದು,ಆತ್ಮ ಹತ್ಯೆಯೇ ಗತಿ ಎನಿಸಿ ಹೊರಬರುತಿರಲು ನನ್ನ ಗಂಡನ ಧ್ವನಿ ಬಂದಿತು,ಇನ್ನು ನೀನು ನಮಗೆಲ್ಲ ದ್ರೌಪದಿ.
ಕರ್ಮಣ್ಯೇ ವಾಧಿಕಾರಸ್ಯೇ ಮಾ ಫಲೆಷು ಕದಾಚನ……….
ಯಾಕೆ ನಾನು ಕರ್ಮವನ್ನು ಮಾಡಲಿಲ್ಲವೇ? ನನ್ನ ಕರ್ಮಕ್ಕೆ ಈ ಪ್ರತ್ಯುತ್ತರವೆ? ಭೂಮಿಯು ಯಾಕೆ ಬಾಯ್ತೆರೆಯಲಾರದು,ವೈದೇಹಿಯಂತೆ ನನ್ನನ್ನು ಸ್ವೀಕರಿಸಲಾರದು.ನನ್ನ ಮನದಳಲನ್ನು ಯಾರಿಗೆ ಹೇಳಲಿ? ಹಗಲು ರಾತ್ರಿಯ ಭೇದವರಿಯದೆ ಪ್ರಾಣಿಯಂತಾಯಿತು ನನ್ನ ಜೀವನ.ನಾನು ಅತ್ತೆಯವರಿಗೆ ಕಾಯ್ದೆ.ಆರು ತಿಂಗಳ ನಂತರ ಮನೆಗೆ ಬಂದರು.ಅವರು ಗಾಂಧಾರಿ. ಮನಸಿನ ಅಳನನ್ನು ಸಾರಿ ಸಾರಿ ಹೇಳಿಕೊಂಡೆ.ಇವರು ಹೆಣ್ಣಲ್ಲ ಕಲ್ಲು ಬಂಡೆ ಅನಿಸಿತ್ತು.ಹೆತ್ತವರಿಗೆ ಹೆಗ್ಗಣ ಮುದ್ದಲ್ಲವೆ? ಆದರೆ ನಾನು ಯಾರಿಗೆ ಮುದ್ದು? ನಾನು ತರಕಾರಿ ಹಣ್ಣುಗಳ ಹಾಗಾಗಿಬಿಟ್ಟೆ. ಒಳ್ಳೆಯ ಬೆಲೆಗೆ ಮಾರಾಟ ನಂತರ ಹಂಚಿಕೊಂಡು ತಿನ್ನುವ ಸಾಮಗ್ರಿ.ಈ ಕಂದನೂ ಮಡಿಲಿಗೆ ಬಂದ.ಮಗು ಹುಟ್ಟಿದ ಮಾರನೆಯ ದಿನವೇ ಹೇಗೋ ಮಾಡಿ ಓಡಿ ಬಂದೆ.ನಾನು ದ್ರೌಪದಿಯಾಗಲು ಸಾಧ್ಯವೆ? ಅವಳಿಗೆ ಅರ್ಜುನನಿದ್ದ,ಅವಳು ಕರೆದರೆ ಕಾಪಾಡಲು ಕೃಷ್ಣನಿದ್ದ,ನನಗ್ಯಾರು? ನನಗೆ ನಾನು,ಗೋಡೆಗೆ ಮಣ್ಣು.ಏನೋ ಜೀವನದ ಬಗ್ಗೆ ಜಿಗುಪ್ಸೆ.ಸಾಯಲು ಕಷ್ಟ ಬದುಕುವುದಂತೂ ಇನ್ನೂ ಕಷ್ಟವಾಗಿತ್ತು. ಅವಳಿಗೆ ಸಮಾಧಾನ ಮಾಡಿ ನನ್ನ ಜಾಗದಲ್ಲಿ ಮಲಗು ಎಂದೆ.
ರಾತ್ರಿಯಎರಡು ಗಂಟೆ. ಜಗತ್ತು ನಿದ್ರಿಸುತ್ತಿತ್ತು. ನಾನು ಇಳಿಯುವಸ್ಥಳಬಂತು. ನಮ್ಮವರ ಜೊತೆ ಇಳಿದು ಹೊರಟು ಬಿಟ್ಟೆ.ಯಾವಾಗ ಕಾರಲ್ಲಿ ಕುಳಿತೆನೋ ಭೂಕಂಪವಾದಂತೆನಿಸಿತ್ತು. ಬಲು ವೇಗದಲ್ಲಿ ತಿರುಗಿ ಓಡಿ ಬಂದೆ. ಎಲ್ಲವೂ ಸ್ತಬ್ಧ. ದೀರ್ಘ ಮೌನ. ರೈಲು ತನ್ನ ವೇಗವನ್ನು ಹಿಡಿದಿತ್ತು,ರೈಲಿನ ಘರ್ಷಣೆಯಲ್ಲಿ ಅವಳ ವೇದನೆಯೂ ಐಕ್ಯವಾಗಿತ್ತು.ಅವಳು ನಿಮಗೂ ಸಿಗಬಹುದು.ತನ್ನ ಅಂತರಾಳವನ್ನು ಹೇಳಿಕೊಳ್ಳಲು ಹಾತೊರೆಯುವಳು,ಅವಳ ನೇತ್ರಗಳಿಂದ ನಿಮಗೂ ಕಥೆಯನ್ನು ಸಾರಬಲ್ಲಳು.
ಅವಳನ್ನು ನೀವು ಕಂಡಿರಾ…….? ಅವಳನ್ನು ನೀವು ಕಂಡಿರಾ……?
(ಸತ್ಯ ಘಟನೆಯ ಆಧಾರಿತ ಕಥೆ)
(  23 feb 2014 ಖುಷಿ ಕನ್ನಡ ಪ್ರಭದಲ್ಲಿ ಪ್ರಕಟವಾದ ಕಥೆ)

-


1 comment:

  1. ಮನಯ ಮುಚ್ಚಿದ ಬಾಗಿಲು, ಕಿಟಕಿಗಳ ಹಿಂದೆ ಬಿಕ್ಕಳಿಸುವ ಇಂತಹ ಹೆಣ್ಣು ಮಕ್ಕಳ ಅಳಲನ್ನು ಗಮನಿಸುವವರು ಯಾರು? ಅಸಲು ಒಳಗೆಯೇ ಬೆಂಕಿಯನಿಕ್ಕುವ ಆ ನಿರ್ಧಯಿಗಳಿಗೂ, ನಿರ್ಭಾವುಕ ಗೋಡೆಗಿನ್ನೆಂತ ವ್ಯತ್ಯಾಸ?

    ಅಳುವ ಕಡಲೊಳು ಎಂದು ತೇಲಿ ಬರುವುದೋ ನಗೆಯ ಹಾಯಿ ದೋಣಿ?

    ReplyDelete